ಗಣಿತ ವಿಜ್ಞಾನಿ ರಾಮಾನುಜನ್

ಜಿ. ಟಿ. ನಾರಾಯಣರಾವ್
ಕಸ್ತೂರಿ, ಎಪ್ರಿಲ್ ೧೯೭೬

ತಮಿಳು ನಾಡಿನ ಶುಂಭಕೋಣಮ್ ಪಟ್ಟಣ. ಶ್ರೀನಿವಾಸ ಅಯ್ಯಂಗಾರ್ಯರು ಅಲ್ಲಿನ ಬಟ್ಟಿ ಅಂಗಡಿಯೊಂದರಲ್ಲಿ ಗುಮಾಸ್ತರು. ಕೋಮಲಮ್ಮಾಳ್ ಇವರ ಹೆಂಡತಿ. ಈ ದಂಪತಿಗಳ ಬದುಕು ಬಲು ಬಡತನದ್ದಾದರೂ ಇವರು ಆಸ್ತಿಕ ಶ್ರೀಮಂತರು. ನಾಮಕ್ಕಲ್ ಕ್ಷೇತ್ರದ ನಾಮಗಿರಿ ದೇವಿಯ ಪರಮ ಭಕ್ತರು. ಇವರ ಮೊದಲ ಕೂಸಿನ ಅವತಾರ ೧೮೮೭ ರ ಡಿಸೆಂಬರ್ ೧೧ ರಂದು ಆಯಿತು. ಈ ಮಗುವೇ ಮುಂದೆ ಜಗತ್ಪ್ರಸಿದ್ಧ ಗಣಿತ ವಿದ್ವಾಂಸ ಶ್ರೀನಿವಾಸ ರಾಮಾನುಜನ್ ಆಗುವುದೆಂದು ಆಗ ಯಾರೂ ಕನಸು ಸಹ ಕಂಡಿರಲಾರರು. ಭಾರತದ ಪ್ರಾಚೀನ ಗಣಿತ ಪರಂಪರೆ ಹಿಂಗಿ ಹೋಗಿ ಆ ವೇಳೆಗೆ ಹಲವು ಶತಮಾನಗಳೇ ಸಂದುಹೋಗಿದ್ದುವು. ಇನ್ನು ಮನೆತನದಲ್ಲಿಯೋ ವ್ಯವಹಾರ ಪ್ರಪಂಚದ ನೀರಸ ಅಂಕೆ ಸಂಖ್ಯೆಗಳ ಹೊರಗಿನ ಗಣಿತ ಪ್ರಪಂಚದ ಅರಿವೇ ಯಾರಿಗೂ ಇರಲಿಲ್ಲ. ಇಂಥ ಪರಿಸರದಲ್ಲಿ ಈ ಗಣಿತ ಬ್ರಹ್ಮನ ಉಗಮವಾದದ್ದು ನಿಸರ್ಗದ ಅನೇಕ ಏಸ್ಮಯಗಳಲ್ಲಿ ಒಂದು.

ರಾಮಾನುಜನ್ ಓರ್ವ ಹುಟ್ಟಾ ಗಣಿತಜ್ಞ. ತೀರ ಎಳವೆಯಲ್ಲೇ ಅವರಿಗೆ ಮೂಡಿದ ಪ್ರಶ್ನೆಯಿದು "ಗಣಿತದಲ್ಲಿ ಪರವೋಚ್ಚ ಸತ್ಯ ಏನು?" ಅವರು ಮೂರನೆಯ ಫಾರಂ ವಿದ್ಯಾರ್ಥಿ ಆಗಿದ್ದಾಗ ತರಗತಿಯಲ್ಲಿ ನಡೆದ ಒಂದು ಘಟನೆ ವರದಿ ಆಗಿದೆ. ಭಾಗಾಕಾರದ ಕ್ರಮವನ್ನು ವಿವರಿಸುತ್ತಿದ್ದ ಉಪಾಧ್ಯಾಯರು ಯಾವುದೇ ಸಂಖ್ಯೆಯನ್ನು ಅದರಿಂದಲೇ ಭಾಗಿಸಿದಾಗ ದೊರೆಯುವ ಉತ್ತರ ೧ ಎಂದು ಸಮಾರೋಪಿಸಿದರು. "ಹಾಗಾದರೆ ೦ ಯನ್ನು ೦ ಯಿಂದ ಭಾಗಿಸಿದಾಗ ಸಹ ೧ ದೊರೆಯುವುದೇ?" ರಾಮಾನುಜನ್ ತೀರ ಸಹಜವಾಗಿ ಎತ್ತಿದ ಈ ಪ್ರಶ್ನೆಗೆ ಉಪಾಧ್ಯಾಯರು ಏನು ಉತ್ತರ ನೀಡಿದರು ಎನ್ನುವುದು ತಿಳಿದಿಲ್ಲ.

ಇಂಥ ಮೂಲಭೂತ ಗಣಿತ ಸಂದೇಹಗಳು ಅವರಿಗೆ ಪ್ರವಾಹ ರೂಪದಲ್ಲಿ ಬರತೊಡಗಿದುವು. ಇಂದಿನ ಬಿ. ಎಸ್‌ಸಿ. ಗಣಿತದ ಪ್ರಮುಖಾಂಶಗಳನ್ನು ಅವರು ಸ್ವಂತ ಸಂಶೋಧನೆ ಚಿಂತನೆಗಳಿಂದ ಇಲ್ಲವೇ ಕೈಗೆದೊರೆತ ಗಣಿತ ಗ್ರಂಥಗಳ ಅವಲೋಕನದಿಂದ ತಿಳಿದುಕೊಂಡಿದ್ದರು (೧೯೦೨). ನಾಮಗಿರಿದೇವಿ ತನಗೆ ಕನಸ್ಸಿನಲ್ಲಿ ಕಾಣಿಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿದ್ದಳೆಂದು ರಾಮಾನುಜನ್ ಒಮ್ಮೆ ಹೇಳಿದ್ದರು. ನಿದ್ದೆ ತಿಳಿದಿದ್ದಾಗ ಅವರು ಮಾಡುತ್ತಿದ್ದ ಮೊದಲ ಕಾರ್ಯವೆಂದರೆ ಈ ಎಲ್ಲ ಪರಿಹಾರಗಳನ್ನೂ ತಮ್ಮ ಅಮೂಲ್ಯ ಟಿಪ್ಪಣಿ ಪುಸ್ತಕದಲ್ಲಿ ಗುರುತಿಸುತ್ತಿದ್ದುದು. ಬಳಿಕ ನಿಧಾನವಾಗಿ ಅವನ್ನು ಸರಿಯೇ ಅಲ್ಲವೇ ಎಂದುತಾಳೆ ನೋಡುತ್ತಿದ್ದರು. ಪ್ರತಿಯೊಂದು ಫಲಿತಾಂಶಕ್ಕೂ ನಿಷ್ಕೃಷ್ಟವಾದ ಸಾಧನೆಯನ್ನು ಒದಗಿಸುವುದು ಮಾತ್ರ ಅವರಿಗೆ ಸಾಧ್ಯವಾಗುತ್ತಿರಲಿಲ್ಲ.

ಮದರಾಸು ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ರಾಮಾನುಜನ್ ಪ್ರಥಮ ಶ್ರೇಣಿಯನ್ನು ಪಡೆದದ್ದರಿಂದ ಅವರಿಗೆ ಮುಂದಿನ ಅಧ್ಯಯನ ನಡೆಸಲು ವಿದ್ಯಾರ್ಥಿ ವೇತನ ದೊರೆಯಿತು. ಎಫ್. ಎ. ತರಗತಿಗಳಲ್ಲಿ ಅವರು ಗಣಿತದ ಜೊತೆಗೆ ಇತರ ಹಲವಾರು ವಿಷಯಗಳನ್ನು ಸಹ ಕಡ್ಡಾಯವಾಗಿ ಕಲಿಯಲೇಬೇಕಾಗಿತ್ತು. ಆದರೆ ಅವರ ಆಸಕ್ತಿ ಇದ್ದುದು ಗಣಿತದಲ್ಲಿ ಮಾತ್ರ. ಸ್ವತಃ ಅಧ್ಯಾಪಕರೇ ಉನ್ನತ ಗಣಿತ ಸಮಸ್ಯೆಗಳನ್ನೂ ಸಂಶೋಧನ ಪ್ರಬಂಧಗಳನ್ನೂ ಅರ್ಥವಿಸುವುದರಲ್ಲಿ ರಾಮಾನುಜನ್ ಅವರ ನೆರವನ್ನು ಪಡೆಯುವುದಿತ್ತು. ಪರೀಕ್ಷೆ ಮುಗಿಯಿತು. ಗಣಿತ ಪ್ರತಿಕೆಯಲ್ಲೇನೋ ಉತ್ತಮ ಅಂಕಗಳೂ ಬಂದುವು. ಆದರೆ ಇತರ ಕಡ್ಡಾಯ ಪತ್ರಿಕೆಗಳಲ್ಲಿ ಕನಿಷ್ಠ ಅಂಕಗಳು ಸಹ ಬರಲಿಲ್ಲ. ಆದ್ದರಿಂದ ಈ ತರುಣ ಮೇಧಾವಿಗೆ ಲಭಿಸಿದ 'ಗೌರವ' ಎಫ್. ಎ. ಪರೀಕ್ಷೆಯಲ್ಲಿ ಎಫ್ ಎ ಐ ಎಲ್ (೧೯೦೭).

೧೯೦೭-೧೧ ರ ಅಂತರವನ್ನು ರಾಮಾನುಜನ್ ಅವರ ಬಾಳಿನ ತೀವ್ರ ಪಟುತ್ವದ ಮೊದಲ ಅವಧಿ ಎಂದು ಗುರುತಿಸಿದ್ದಾರೆ. ಆಗ ಅವರನ್ನು ಆಂತರಿಕ ಜ್ಯೋತಿಯೊಂದು ಮುನ್ನೆಡೆಸುತ್ತಿರುವಂತೆ ತೋರುತ್ತಿತ್ತು. ಅಂದು ಅವರು ಆಸಕ್ತಿ ತಳೆದಿದ್ದ ಕ್ಷೇತ್ರಗಳೆಂದರೆ ಹೈಪರ್ ಜೊಮೆಟ್ರಿಕ್ ಶ್ರೇಣಿಗಳು, ಅವಿಭಾಜ್ಯ ಹಾಗೂ ಸಂಯುಕ್ತ ಸಂಖ್ಯೆಗಳು, ಮಾಯಾ ಚೌಕಗಳು, ಸಂತತ ಭಿನ್ನರಾಶಿಗಳು, ಸಂಖ್ಯೆಗಳ ವಿಭಾಗೀಕರಣ, ಎಲಿಪ್ಟಿಕ್ ಅನುಕಲಗಳು, ಇತ್ಯಾದಿ. ಇವು ಆ ವೇಳೆಗಾಗಲೇ ಆಧುನಿಕ ಪಾಶ್ಚಾತ್ಯಗಣಿತದಲ್ಲಿ ಬೆಳೆದು ವಿಕಸಿಸಿದ್ದ ವಿವಿಧ ಪರಿಕಲ್ಪನೆಗಳು. ಆದರೆ ರಾಮಾನುಜನ್ ಅವರಿಗೆ ಈ ಯಾವ ವಿವರವೂ ತಿಳಿದಿರದಿದ್ದ — ಇನ್ನೂ ಸ್ವಷ್ಟವಾಗಿ ಹೇಳುವುದಾದರೆ ಇವು ಇದ್ದೀತೆಂಬ ಅರಿವು ಕೂಡ ಇರದಿದ್ದ — ದಿವಸಗಳವು.

ಶ್ರೀನಿವಾಸ ರಾಮಾನುಜನ್ ಅವರ ಚಿತ್ರ.

ಅಂದಿನ ಸಂಪ್ರದಾಯಾನುಸಾರ ರಾಮಾನುಜನ್ ಅವರ ಮದುವೆಯನ್ನು ಜಾನಕಿ ಅಮ್ಮಾಳ್ ಎಂಬ ಒಂಬತ್ತು ವರ್ಷದ ಮಗುವಿನೊಡನೆ ಮಾಡಿದರು (೧೯೦೯). ಗೃಹಸ್ಥ, ಬಡವ, ಮುಗ್ಧ, ಸದಾ ಗಣಿತಾಸಕ್ತ ರಾಮಾನುಜನ್ ಸರ್ಕಾರದ ಒಂದು ಇಲಾಖೆಯಲ್ಲಿ ಗುಮಾಸ್ತಿಕೆ ಪಡೆಯಲು ಅಲೆದಾಡಿದರು. ಅವರ ಗಣಿತ ಪ್ರತಿಭೆಯನ್ನು ಗುರುತಿಸಿದ ಕೆಲವು ಹಿರಿಯ ಅಧಿಕಾರಿಗಳು ಮದರಾಸಿನ ಅಕೌಂಟೆಂಟ್-ಜನರಲ್ ಅವರ ಕಚೇರಿಯಲ್ಲಿ ಒಂದು ಹುಗಾಮೀ ಗುಮಾಸ್ತಿಕೆಯನ್ನು ದೊರಕಿಸಿ ಕೊಟ್ಟರು. ಇದರ ಅವಧಿ ಮುಗಿದೊಡನೆ ಮತ್ತೆ ನಿರುದ್ಯೋಗ, ಹೊಟ್ಟೆ ಪಾಡಿಗಾಗಿ ಅಲೆತ. ಇಂಥ ಒಂದು ದಿವಸ ಅವರಿಗೆ ತಮ್ಮ ಶಾಲಾ ದಿನಗಳ ಸಹಪಾಠಿಯೊಬ್ಬನ ಭೇಟಿ ಅಕಸ್ಮಾತ್ತಾಗಿ ಆಯಿತು (೧೯೧೦). ಆತನ ವಿಶ್ವಪ್ರಯತನ್ನದ ಫಲವಾಗಿ ರಾಮಾನುಜನ್ ಭಾರತೀಯ ಗಣಿತ ಸಂಘದ ಅಧ್ಯಕ್ಷರೂ ನೆಲ್ಲೂರು ಜಿಲ್ಲೆಯ ಕಲೆಕ್ಟಕರೂ ಆಗಿದ್ದ ದಿವಾನ್ ಬಹದ್ದೂರ್ ರಾಮಚಂದ್ರರಾಯರನ್ನು ನೆಲ್ಲೂರಿನಲ್ಲಿ ಭೇಟಿ ಆಗಬೇಕೆಂದು ಏರ್ಪಾಡಾಯಿತು. ಆ ಸನ್ನಿವೇಶವನ್ನು ಸ್ವತಃ ರಾಮಚಂದ್ರರಾಯರೇ ಈ ರೀತಿ ನಿರೂಪಿಸಿದ್ದಾರೆ: "ಕೆಲವು ವರ್ಷಗಳ ಹಿಂದಿನ ಪ್ರಸಂಗ. ಗಣಿತ ಜ್ಞಾನದಲ್ಲಿ ತೀರ ಎಳೆ ಮಗುವಿನಂತಿದ್ದ ನನ್ನ ಸಂಬಂಧಿ ಹುಡುಗನೊಬ್ಬ 'ಕಕ್ಕಾ! ಗಣಿತ ವಿಚಾರವನ್ನೇ ಮಾತನಾಡುತ್ತಿರುವ ಒಬ್ಬ ಆಗಂತುಕ ನನ್ನಲ್ಲಿಗೆ ಬಂದಿದ್ದಾನೆ. ಅವನು ಹೇಳುವುದು ನನಗೆ ಅರ್ಥವಾಗುತ್ತಿಲ್ಲ. ಅವನ ಮಾತಿನಲ್ಲಿ ಏನಾದರೂ ಹುರುಳಿದೆಯೇ ಎಂದು ನೀವು ನೋಡುತ್ತೀರಾ?' ಎಂದು ಕೇಳಿದ. ಗಣಿತ ಧೀಮಂತಿಕೆಯಲ್ಲಿ ಪರಿಪೂರ್ಣನಾಗಿದ್ದ ನಾನು ರಾಮಾನುಜನ್‌ನಿಗೆ ನನ್ನನ್ನು ಬಂದು ನೋಡಲು ಪರವಾನಿಗೆಯನ್ನು ಅನುಗ್ರಹಿಸಿದೆ. ಬಂದವನು ಕುಳ್ಳ, ಒರಟ, ದಪ್ಪಗಿದ್ದ, ಗಡ್ಡ ಕೆರೆದಿರಲಿಲ್ಲ, ಅಷ್ಟೇನೂ ಮಡಿಯಾಗಿಯೂ ಇರಲಿಲ್ಲ. ಆದರೆ ಒಂದು ಗುಮನಾರ್ಹ ವೈಲಕ್ಷಣ್ಯ ನನ್ನನ್ನು ಆಕರ್ಷಿಸಿತು-ಅತನ ಉಜ್ವಲ ಕಣುಗಳು. ಸವೆದು ಹೋಗಿದ್ದ ಒಂದು ಟಿಪ್ಪಣಿ ಪುಸ್ತಕವನ್ನು ಅವನು ಕುಕುಳಡಿಯನ್ನು ದಾರುಣವಾಗಿತ್ತು. ಯಾವ ವಿಧವಾದಮನ್ನಣೆಗೂ ಅವನು ಹಾತೊರೆದವನಲ್ಲ. ಅವನಿಗೆ ಬೇಕಾದದ್ದು ಬಿಡುವು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಅವನಿಗೆ ಯಾವ ಶ್ರಮವೂ ಆಗದೆ ಸರಳ ಆಹಾರ ದೊರೆಯಬೇಕು ಮತ್ತು ಕನಸುಗಳನ್ನು ಕಾಣಲು ಅವಕಾಶ ಒದಗಬೇಕು. ರಾಮಾನುಜನ್ ತನ್ನ ಟಿಪ್ಪಣಿ ಪುಸ್ತಕವನ್ನು ತೆರೆದು ಅದರಲ್ಲಿದ್ದ ಕೆಲವು ಆವಿಷ್ಕಾರಗಳನ್ನು ನನಗೆ ವಿವರಿಸಲು ತೊಡಗಿದ. ಇಲ್ಲೇನೋ ಅಸಾಮಾನ್ಯವಾದದ್ದು ಇದೆ ಎಂದು ತತ್‌ಕ್ಷಮ ನನಗೆ ಹೊಳೆಯಿತು. ಆದರೆ ಅವನು ಹೇಳುತ್ತಿರುವುದು ಸುಬದ್ಧವೇ ಅಬದ್ಧವೇ ಎಂಬುದನ್ನು ತೀರ್ಮಾನಿಸಲು ನನ್ನ ಜ್ಞಾನ ಸಾಲವಾಗಿತ್ತು. ತೀರ್ಪನ್ನು ತಡೆ ಹಿಡಿದು ಪುನಃ ಬಂದು ನನ್ನನ್ನು ಕಾಣುವಂತೆ ಅವನಿಗೆ ಹೇಳಿದೆ. ನನಗೆ ಅದೆಷ್ಟು ಸ್ವಲ್ಪ ತಿಳಿದಿತ್ತು ಎನ್ನು ಅಂಶ ಆ ವೇಳೆಗಾಗಲೇ ಅವನಿಗೆ ಮನವರಿಕೆ ಆಗಿತ್ತು. ಹೀಗಾಗಿ ಕೆಲವು ಸರಳ ಫಲಿತಾಂಶಗಳನ್ನು ಮಾತ್ರ ನನಗೆ ತೋರಿಸಿದ. ಇವು ಪ್ರಚಲಿತ ಗ್ರಂಥಗಳನ್ನು ಬಹುವಾಗಿ ಮೀರಿದಂಥವಾಗಿದ್ದುವು. ಈತ ಒಬ್ಬ ವಿಲಕ್ಷಣ ಪುರುಷ ಎನ್ನುವುದರಲ್ಲಿ ನನಗೆ ಸಂದೇಹವೇ ಉಳಿಯಲಿಲ್ಲ. ಅವನಿಗೆ ಏನು ಬೇಕಾಗಿದೆ ಎಂದು ಕೇಳಿದೆ. ತನ್ನ ಸಂಶೋಧನೆಗಳನ್ನು ಮುಂದುವರಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಬದುಕಿಕೊಂಡಿರಲು ಆಹಾರಬೇಕೆಂದು ಅವನು ಕೋರಿದ."

ಇಂಥ ಅದ್ಭುತ ಮೇಧಾವಿ ಸರ್ಕಾರೀ ಖಾತೆಯೊಂದರ ಬೌದ್ಧಿಕತಾವಿಹೀನ ಮೂಲೆಯಲ್ಲಿ ಕೊಳೆತು ನಶಿಸಿ ಹೋಗಬಾರದೆಂದು ಆಗ ರಾಮಚಂದ್ರರಾಯರು ಮನಸಾರೆ ನಿರ್ಧರಿಸಿದರು. ತಾನು ಪ್ರತಿ ತಿಂಗಳೂ ಒಂದಿಷ್ಟು ಮೊಬಲಗನ್ನು ಕೊಡುವುದಾಗಿಯೂ ರಾಮಾನುಜನ್ ಅದನ್ನು ಸ್ವೀಕರಿಸಿ ಮದರಾಸು ನಗರದಲ್ಲಿ ಇದ್ದುಕೊಂಡು ಸಂಶೋಧನೆಗಳನ್ನು ಮುಂದುವರಿಸಬೇಕಾಗಿಯೂ ಅವರು ಸೂಚಿಸಿದರು. ಇಂಥ ಔದಾರ್ಯಪೂರಿತ ಉತ್ತೇಜನದಿಂದಾಗಿ ರಾಮಾನುಜನ್ ಅವರಿಗೆ ತಾತ್ಕಾಲಿಕ ಪರಿಹಾರ ಒದಗಿತು. (೧೯೧೧-೧೨) ಆದರೆ ಸ್ವಾಭಿಮಾನಿ ರಾಮಾನುಜನ್ ಇತರರ ಔದಾರ್ಯದ ಮೇಲೆಯೇ ಬಲುಕಾಲ ಬದುಕನ್ನು ಮುಂದುವುರಿಸಲು ಒಪ್ಪಲಿಲ್ಲ. ಪುನಃ ಹಿರಿಯರ ಶಿಫಾರಿಸುಗಳ ಫಲವಾಗಿ ಇವರಿಗೆ ಮದರಾಸಿನ ಪೋರ್ಟ್ ಟ್ರಸ್ಟಿನಲ್ಲಿ ಗುಮಾಸ್ತಿಕೆ ದೊರೆಯಿತು (೧೯೧೨). ಹೀಗೆ ಒಂದು ಗೊತ್ತಾದ ಹುದ್ದೆ, ಸಂಬಳ, ಜೀವನಯಾಪನೆ ಅನುಕೂಲ ಪರಿಸರ ಸ್ಥಿರವಾದ್ದರಿಂದ ಅವರು ನಿರಾಡಂಬರವಾಗಿ ನಿರಾತಂಕವಾಗಿ ಬುದುಕು ನಡೆಸಲು ಸಾಧ್ಯವಾಯಿತು; ಗಣಿತಾಧ್ಯಯನವನ್ನು ಅಧಿಕೋತ್ಸಾಹದಿಂದ ಮುಂದುವರಿಸಲು ಅನುಕೂಲವಾಯಿತು. ಇದೇ ಸುಮಾರಿಗೆ ಭಾರತೀಯ ಗಣಿತ ಸಂಘದ ಸಂಶೋಧನ ಪತ್ರಿಕೆ ರಾಮಾನುಜನ್ ಅವರ ಗಣಿತ ಪ್ರಬಂಧಗಳನ್ನು ಪ್ರಕಟಿಸಲು ತೊಡಗಿತು. ೧೯೦೦ ರ ಫೆಬ್ರುವರಿ ಸಂಚಿಕೆಯಲ್ಲಿ ಮೊದಲ ಪ್ರಬಂಧ ಬೆಳಕು ಕಂಡಿತು.

ಗಣಿತಜ್ಞರಿಗೂ ಕಬ್ಬಿಣದ ಕಡಲೆ

ಮುಂಬಯಿಯ ಟಾಟ ಮೂಲ ಸಂಶೋಧನ ಮಂದಿರದ ಗಣಿತ ಪ್ರಾಧ್ಯಾಪಕ ಪ್ರೋ. ಕೆ. ಜಿ. ರಾಮನಾಧನ್ ಒಂದು ಲೇಖನದಲ್ಲಿ (೧೯೭೪) ಹೀಗೆ ಬರೆದಿದ್ದಾರೆ: "...ಮೇಧಾವಿಯಾದ ಖಾಸಗಿ ಓದುಗನೊಬ್ಬನಿಗೆ, ಅಷ್ಟೇಕೆ; ಕಾಲೇಜು ಗಣಿತದಲ್ಲಿ ಸ್ಪಲ್ಪವಾದರೂ ಪ್ರವೇಶವಿರುವಾತನಿಗೆ ಕೂಡ, ರಾಮಾನುಜನ್ ದಾಳಿ ಮಾಡಿದ ಇಲ್ಲವೇ ಬಿಡಿಸಿದ ಕೆಲವಾದರೂ ಸುಂದರ ಸಮಸ್ಯೆಗಳನ್ನು, ಮುಖ್ಯವಾಗಿ ಅವರು ಸೃಷ್ಟಿಸಿದಂಥ ಹಲವಾರು ರಮಣೀಯ ಮತ್ತು ಗಮನಾರ್ಹ ಊಹೆಗಳನ್ನು - ಇವು ಈಚೆಗಿನ ಕೆಲವು ವರ್ಷಗಳಲ್ಲಿ ಮಾತ್ರ ಬಿಡಿಸಲ್ಪಟ್ಟಿವೆ - ಶ್ರುತಪಡಿಸಿ 'ಪೂರ್ವದ ಒಂದು ಅದ್ಭುತವನ್ನಲ್ಲ, ಇಲ್ಲವೇ ಸ್ಫೂರ್ತಿಮಂತ ಹೆಡ್ಡನನ್ನಲ್ಲ... ಬದಲು ಮಹಾಗಣಿತವಿದನಾದ ತರ್ಕಸಮಂಜಸ ಮನುಷ್ಯನೆನ್ನು" ಪ್ರದರ್ಶಿಸುವುದು ಈ ಕಿರಿಯ ಬರವಣಿಗೆಯಲ್ಲಿ ಹೆಚ್ಚು ಕಡಿಮೆ ಅಸಾಧ್ಯವೆಂದೇ ಹೇಳಬಹುದು... ರಾಮಾನುಜನ್ ಸೃಷ್ಟಿಸಿದ ಪ್ರಧಾನ ಸಮಸ್ಯೆಗಳ ಪೈಕಿ ಹೆಚ್ಚಿನವು ೧೯೭೩ರ ಹೊತ್ತಿಗೆ ಪರಿಹರಿಸಲ್ಪಟ್ಟಿವೆ. ಇವುಗಳ ಸಾಧನೆಗಳನ್ನು ಸರಳೀಕರಿಸಿ ಸಂಖ್ಯಾ ಸಿದ್ಧಾಂತದ ವಿದ್ಯಾರ್ಥಿಗಳಿಗೆ ಒದಗಿಸುವುದು ಒಂದು ಯೋಗ್ಯಕ್ರಮ. ಬಹುಶಃ ಭವಿಷ್ಯದ ಗಣಿತಜ್ಞರಿಗೆ ಇದೊಂದು ಸವಾಲಾದೀತು."

ಪೋರ್ಟ್ ಟ್ರಸ್ಟಿನ ಹಿರಿಯ ಅಧಿಕಾರಿಗಳಿಗೆಲ್ಲರಿಗೂ ರಾಮಾನುಜನ್ ಅವರ ವಿಚಾರದಲ್ಲಿ ಅಪಾರ ಅನುಕೆಂಪ ಪ್ರೀತಿ ಇದ್ದವು. ಈ ಮಹಾನುಭಾವನ ನೈಜ ಮೌಲ್ಯವನ್ನು ಅಳೆಯಲು ಸಮರ್ಥರಾದ ಓರ್ವ ವ್ಯಕ್ತಿ ಎಂದರೆ ಅಂತಾರಾಷ್ಟ್ರೀಯ ಖ್ಯಾತ ಗಣಿತ ವಿದ್ವಾಂಸ ಹಾಗೂ ಕೇಂಬ್ರಿಜಿನ ಟ್ರಿನಿಟಿ ಕಾಲೇಜಿನ ಗಣಿತ ಪ್ರಾಧ್ಯಾಪಕ ಜಿ. ಎಚ್. ಹಾರ್ಡಿ (೧೮೭೭-೧೮೪೭) ಎಂದು ಇವರೆಲ್ಲರೂ ಒಮ್ಮತದಿಂದ ನಿರ್ಧರಿಸಿದರು. ಈ ಹಿರಿಯ ಮಿತ್ರರ ಸಲಹೆ ಮೇರೆಗೆ ರಾಮಾನುಜನ್ ಹಾರ್ಡಿಯವರಿಗೆ ಒಂದು ಸ್ವಪರಿಚಯ ಪತ್ರವನ್ನು ಬರೆದರು (ಜನವರಿ ೧೬, ೧೮೧೩). "ನಾನು ಮದರಾಸಿನ ಪೋರ್ಟ್ ಟ್ರಸ್ಟ್ ಕಛೇರಿಯ ಲೆಕ್ಕ ಪತ್ರ ವಿಭಾಗದಲ್ಲಿ ೧೦ ಪೌಂಡ್ ವಾರ್ಷಿಕ ತರಬನ್ನು ಪಡೆಯುತ್ತಿರುವ ಓರ್ವ ಕಾರಕೂನ ಎಂದು ತಮಗೆ ಅರಿಕೆ ಮಾಡಿಕೊಳ್ಳಲು ಅನುಮತಿ ಕೋರುತ್ತೇನೆ. ಈಗ ನನ್ನ ವಯಸ್ಸು ಸುಮಾರು ಇಪ್ಪತ್ತಮೂರು ವರ್ಷಗಳು. ನಾನು ವಿಶ್ವವಿದ್ಯಾಲಯದ ಶಿಕ್ಷಣ ಪಡೆದವನಲ್ಲ. ಪ್ರೌಡ ಶಾಲೆಯ ಸಾಧಾರಣ ವಿದ್ಯೆಯನ್ನು ಮಾತ್ರ ಪಡೆದಿರುವೆನಷ್ಟೆ. ಶಾಲೆಯನ್ನು ಬಿಟ್ಟ ಬಳಿಕ ಬಿಡುವೇಳೆಯಲ್ಲೆಲ್ಲ ನಾನು ಗಣಿತಾನ್ವೇಷಣೆಯನ್ನು ಮಾಡಿಕೊಂಡು ಬಂದಿರುವೆನು. ವಿಶ್ವವಿದ್ಯಾಲಯದ ಶಿಕ್ಷಣ ರಂಗದಲ್ಲಿ ಅನುಸರಿಸುವ ಸಾಂಪ್ರದಾಯಿಕ ಕ್ರಮಬದ್ಧ ಶಿಕ್ಷಣ ವಿಧಾನದ ಮೂಲಕ ನಡೆದು ಬಂದವ ನಾನಲ್ಲ. ನಾನು ಹೊಸ ಹಾದಿಯೊಂದನ್ನು ನನಗಾಗಿ ರಚಿಸಿಕೊಳ್ಳುತ್ತಿದ್ದೇನೆ. ಅಪಸರಣ ಶ್ರೇಣಿಗಳ ಸಾರ್ವತ್ರಿಕ ರೂಪಗಳನ್ನು ನಾನು ವಿಶೇಷವಾಗಿ ಅಧ್ಯಯಿಸಿದ್ದೇನೆ. ಈ ರಂಗದಲ್ಲಿ ನಾನು ಪಡೆದಿರುವ ಫಲಿತಾಂಶಗಳನ್ನು ಸ್ಥಳೀಯ ಗಣಿತಜ್ಞರು 'ಅದ್ಭುತ' ಎಂದಿರುವರು... ಈ ಕಾಗದದೊಂದಿಗೆ ನಾನು ಲಗತ್ತಿಸಿರುವ ಪ್ರಬಂಧಗಳನ್ನು ತಾವು ಪರಾಬರಿಸಿ ನೋಡಬೇಕೆಂದು ಕೋರುತ್ತೇನೆ. ನಾನು ಬಡವ, ಈ ಪ್ರಮೇಯಗಳಲ್ಲಿ ಏನಾದರೂ ಹುರುಳಿದೆ ಎಂದು ನಿಮಗೆ ಅನ್ನಿಸಿದರೆ ಅವನ್ನು ಪ್ರಕಟಿಸಬೇಕೆಂದು ಬೇಡುತ್ತೇನೆ. ನನ್ನ ಅನ್ವೇಷಣೆಗಳ ವಿವರಗಳನ್ನಾಗಲೀ ನಾನು ಪಡೆದಿರುವ ಉತ್ಪನ್ನಗಳನ್ನಾಗಲೀ ಇಲ್ಲಿ ನಮೂದಿಸಿರುವುದಿಲ್ಲ. ಬದಲು ನಾನು ಯಾವ ಚಾಡು ಹಿಡಿದಿದ್ದೇನೆ ಎನ್ನುವುದನ್ನು ಸೂಚಿಸಿದ್ದೇನೆ. ನಾನು ಅನನುಭವಿ. ನೀವು ನೀಡಬಹುದಾದ ಯಾವ ಹಿತೋಕ್ತಿಯೂ ಅಮೂಲ್ಯವಾದದ್ದೆಂದು ನಾನು ಸ್ವೀಕರಿಸುತ್ತೇನೆ. ತೊಂದರೆ ಕೊಟ್ಟಿದ್ದೇನೆ. ನನ್ನನ್ನು ಮನ್ನಿಸಬೇಕಾಗಿ ವಿನಂತಿ." ಈ ಪತ್ರದೊಡನೆ ಲಗತ್ತಿಸಿದ್ದ ಫಲಿತಾಂಶಗಳನ್ನು ಅವಲೋಕಿಸಿದ ಹಾರ್ಡಿಯವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ: "ಅವಿಭಾಜ್ಯಗಳನ್ನು ಕುರಿತ ರಾಮಾನುಡನ್ ಅವರ ಸಿದ್ಧಾಂತ ದೋಷ ಪೂರಿತವಾಗಿತ್ತು... ಇದು ಒಂದು ದೊಡ್ಡ ವೈಫಲ್ಯ ಎನ್ನಬಹುದು. ಹಾಗಿದ್ದರೂ ಅವರ ವೈಫಲ್ಯ ಕೂಡ ಅವರ ಯಾವುದೇ ವಿಜಯ ದಷ್ಬೇ ಅದ್ಭುತ ಎಂದು ನಾನು ಭಾವಿಸಿದ್ದೇನೆ." ಪ್ರಚಲಿತ ಗಣಿತ ಸಂಶೋಧನೆ ಯಾವ ದಿಸೆಯಲ್ಲಿ ಸಾಗಿದೆ ಎನ್ನುಪುದರ ಸುಳಿವೂ ಇಲ್ಲದ ಈ ಒಳನಾಡಿನ ಬಡಕಲು ಹುಡುಗನಿಗೆ ಅದೇ ಸಂಶೋಧನರಂಗದ ಮುಂಚೂಣಿ ವಿದ್ವಾಂಸರಿಗೆ ಎದುರಾಗುತ್ತಿದ್ದ ಮಹಾಸಮಸ್ಯೆಗಳು ಸ್ಫುರಿಸುತ್ತಿದ್ದುದು ಕೂಡ ಒಂದು ಪವಾಡವೇ ಸರಿ ಎಂದು ಹಾರ್ಡಿ ಹೇಳಿದ್ದಾರೆ.

ರಾಮಾನುಜನ್ ಬಗ್ಗೆ ಹಾರ್ಡಿ

೧೯೩೬ರಲ್ಲಿ ಹಾರ್ಡಿಯವರು ಹಾರ್ವರ್ಡಿನಲ್ಲಿ ರಾಮಾನುಜನ್ ಅವರನ್ನು ಕುರಿತು ಮಾಡಿದ ಒಂದು ಉಪನ್ಯಾಸದಲ್ಲಿ ಹೀಗೆ ಹೇಳಿದ್ದಾರೆ: "ನಿಜವಾಗಿಯೂ ಬಲುಗುರುತರವಾದ ಒಂದು ಕಾರ್ಯದ ನಿರ್ವಹಣೆಯನ್ನು ನಾನು ನನಗೆ ವಿಧಿಸಿಕೊಂಡಿದ್ದೇನೆ. ಇದು ಏಕೆ ವಿಫಲವಾದೀತು ಎಂಬುದನ್ನು ಸಮರ್ಥಿಸಬೇಕು ಎಂದು ನಾನು ನಿರ್ಧರಿಸಿದುದಾದರೆ ಈ ಕಾರ್ಯ ಅಸಾಧ್ಯ ಎಂದೇ ಹೇಳಬೇಕಾಗುತ್ತದೆ. ಗಣಿತದ ಈಚೆಗಿನ ಇತಿಹಾಸದಲ್ಲಿ ಅತ್ಯಂತ ವರ್ಣಮಯ ವ್ಯಕ್ತಿಯನ್ನು ಕುರಿತು ನಾನು ಈ ವರೆಗೆ ಎಂದೂ ಮಾಡಿದರದಂಥ ಸಕಾರಣೀಯವಾದ ಒಂದು ಅಂದಾಜನ್ನು ರೂಪಿಸಬೇಕು, ಮಾತ್ರವಲ್ಲ, ನೀವೂ ಇಂಥ ಒಂದು ಅಂದಾಜನ್ನು ರೂಪಿಸಿಕೊಳ್ಳಲು ನಾನು ನೆರವಾಗಬೇಕು. ಇವರ ಜೀವನವೋ ಅದು ವಿರೋಧಾಭಾಷಗಳ ಮತ್ತು ಅಸಾಂಗತ್ಯಗಳ ಒಂದು ಕಂತೆಯೇ ಎಂದು ಭಾಸವಾಗುತ್ತದೆ. ನಾವು ಸಾಧಾರಣವಾಗಿ ಪರಸ್ಪರರನ್ನು ಅಳೆದುಕೊಳ್ಳಲು ಬಳಸುವ ಹೆಚ್ಚು ಕಡಿಮೆ ಎಲ್ಲ ವಿಧಿ ನಿಯಮಗಳಿಂದಲೂ ಅತೀತರಾಗಿ ರಾಮಾನುಜನ್ ತೋರುತ್ತಾರೆ. ಇದು ಹೇಗೂ ಇರಲಿ. ಯಾವದೋ ಒಂದು ಅರ್ಥದಲ್ಲಿ ಇವರೊಬ್ಬ ಬಲು ದೊಡ್ಡ ಗಣಿತಜ್ಞ ಎಂಬ ಒಂದು ತೀರ್ಮಾನದ ಬಗ್ಗೆ ಪ್ರಾಯಶಃ ನಾವೆಲ್ಲರೂ ಒಮ್ಮತದರಾಗಿದ್ದೇವೆ... ರಾಮಾನುಜನ್ ಅದೆಷ್ಟು ಉನ್ನತ ದರ್ಜೆಯ ಗಣಿತಜ್ಞರಾಗಿದ್ದರು ಎಂಬುದನ್ನಾಗಲಿ ಅದಕ್ಕಿಂತ ಮಿಗಿಲಾಗಿ ಅವರು ಅದೆಷ್ಟು ಉನ್ನತ ದರ್ಜೆಯ ಗಣಿತಜ್ಞರಾಗಬಹುದಿತ್ತು ಎಂಬುದನ್ನಾಗಲಿ ಇಂದಿಗಾದರೂ ಯಾರಾದರೂ ಭರವಸೆಯಿಂದ ಹೇಳಿಯಾರು ಎಂದು ನಾನೇನೂ ಭಾವಿಸಿಲ್ಲ... ನನ್ನ ಎದುರಿರುವ ನಿಜವಾದ ತೊಡಕೆಂದರೆ, ಒಂದು ರೀತಿಯಲ್ಲಿ ರಾಮಾನುಜನ್ - ನನ್ನ ಅವಿಷ್ಕಾರ. ಅವರನ್ನು ನಾನು ಸೃಷ್ಟಿಸಿದ್ದಲ್ಲ. ಇತರ ಮಹಾಪುರುಷರಂತೆ ಅವರು ತಮ್ಮನ್ನು ತಾವೇ ಸೃಷ್ಟಿಸಿಕೊಂಡರು. ಆದರೆ ಅವರ ಕೆಲವು ಕೃತಿಗಳನ್ನು ನೋಡುವ ಸಂದರ್ಭ ಒದಗಿದ ಮೊದಲ ಸಮರ್ಧ ವ್ಯಕ್ತಿ ನಾನೇ. ಆಗ ನಾನು ಗುರುತಿಸಿದ್ದು ಎಂಥ ಹೆಗ್ಗೆಯನ್ನು ಎಂಬುದರ ಬಗ್ಗೆ ನನಗೆ ಈಗಲೂ ಸಂತೃಪ್ತಿ ಉಂಟು.

ತಮ್ಮ ಪ್ರಧಮ ಪತ್ರಕ್ಕೆ ಹಾರ್ಡಿಯವರಿಂದ ಆತ್ಮೀಯ ಹಾಗೂ ಸಾನುಕಂಪ ಉತ್ತರ ದೊರೆತಾಗ ರಾಮಾನುಜನ್ ಅವರಿಗೆ ಆದ ಸಂತೋಷ ಸೀಮಾತೀತ. "ನನ್ನ ಪರಿಶ್ಮಮವನ್ನು ಸಹಾನುಭೂತಿಯಿಂದ ಪರಿಶೀಲಿಸುವ ಓರ್ವ ಸ್ನೇಹಿತರನ್ನು ನಿಮ್ಮಲ್ಲಿ ಕಂಡಿದ್ದೇನೆ. ನನಗೆ ಮುಂದುವರಿಯಲು ಇದೊಂದು ದೊಡ್ಡ ಉತ್ತೇಜನ... ನನ್ನ ಬುದ್ಧಿಶಕ್ತಿಯನ್ನು ಕಾಪಾಡಿಕೊಳ್ಳಲು ನನಗೆ ಆಹಾರ ಆಗತ್ಯವಾಗಿದೆ. ಇದೇ ನನ್ನ ಪ್ರಥಮಾವಶ್ಯಕತೆ. ನಿಮ್ಮಿಂದ ಬರಬಹುದಾದ ಯಾವದೇ ಅನು ಕಂಪಪೂರಿತ ಪತ್ರ ಇಲ್ಲಿನ ವಿಶ್ವವಿದ್ಯಾಲಯದಿಂದ ಇಲ್ಲವೇ ಸರ್ಕಾರದಿಂದ ನನಗೊಂದು ಇಲ್ಲವೇ ಸರ್ಕಾರದಿಂದ ನನಗೊಂದು ವಿದ್ಯಾರ್ಥಿವೇತನವನ್ನು ಒದಗಿಸುವಲ್ಲಿ ಫೆಬ್ರುವರಿ ೧೭ ರಂದು (೧೯೧೩) ಹಾರ್ಡಿಯವರಿಗೆ ಉತ್ತರ ಬರೆದರು. ರಾಮಾನುಜನ್ ಅವರನ್ನು ಕೇಂಬ್ರಿಜಿಗೆ ಅಹ್ವಾನಿಸುವುದೊಂದೇ ಸರಿಯಾದ ಪರಿಹಾರ ಎಂದು ಸ್ವಷ್ಟವಾಗಿ ಮನಗಂಡ ಹಾರ್ಡಿಯವರು ಆ ದಿಶೆಯಲ್ಲಿ ಕಾರ್ಯೋದ್ಯುಕ್ತರಾದರು. ಆದರೆ ಅವರಿಗೊಂದು ಸಂದೇವಿತ್ತು; ರಾಮಾನುಜನ್ ತಮ್ಮ ಗಣಿತ ಪ್ರಮೇಯ (ನಿರೂಪಣೆ) ಗಳಿಗೆ ಸಾಧನೆಗಳನ್ನು ಬರೆದು ಕಳಿಸಲು ಹಿಂದೇಟು ಹಾಕುತ್ತಿರುವುದು ಪ್ರಾಯಶಃ ತಾನು ಅವನ್ನು ಕೃತಿಚೌರ್ಯ ಮಾಡಿಯೇನು ಎಂಬ ಊಹೆಯಿಂದಾಗಿರಬಹುದು. ಇದನ್ನು ಪೂರ್ಣವಾಗಿ ನಿವಾರಿಸಲು ಹಾರ್ಡಿ ರಾಮಾನುಜನ್ ಅವರಿಗೆ ಒಂದು ಸ್ಫಟಿಕ ಸ್ಪಚ್ಛ ಪತ್ರ ಬರೆದರು (ಮಾರ್ಚ ೧೬, ೧೯೧೩). "...ನಿಮ್ಮ ಯಾವುದೇ ಫಲತಾಂಶಗಳನ್ನು ನಾನು ಕಾನೂನು ಬಾಹಿರವಾಗಿ ಉಪಯೋಗಿಸಿಕೊಳ್ಳಲು ಯತ್ನಿಸಿದ್ದೇ ಆದರೆ ನನ್ನನ್ನು ಸುಲಭವಾಗಿ ಬಯಲಿಗೆಳೆಯಲು ನಿಮ್ಮಲ್ಲಿ ಸಾಕಷ್ಟು ಪುರಾವೆಗಳಿವೆ. ಈ ಪರಿಸ್ಥಿತಿಯನ್ನು ಇಷ್ಟೊಂದು ಒರಟಾಗಿ ಬರೆದಿರುವುದಕ್ಕಾಗಿ ನೀವು ನನ್ನನ್ನು ಮನ್ನಿಸಬೇಕು. ಉತ್ಕ್ರಷ್ಟ ಉಪಯೋಗ ಪಡೆಯಲು ನಿಮಗೆ ಸಮರ್ಪಕ ಸಂದರ್ಭವನ್ನು ~ದಗಿಸಿಕೊಡುವುದೊಂದೇ ನನ್ನ ಆಸಕ್ತಿ. ಇಲ್ಲದಿದ್ದರೆ ನಾನು ಮೇಲಿನಂತೆ ಬರೆಯುತ್ತಿರಲಿಲ್ಲ." ಮೃದು ಮನಸ್ಸಿನ ರಾಮಾನುಜನ್ ಅವರಿಗೆ ಈ ನೇರ ಬರವಣಿಗೆ ನೋವು ಮಾಡಿತು. ಏಪ್ರಿಲ್ ೧೭ ರಂದು ಅವರು ಹಾರ್ಡಿಯವರಿಗೆ ಉತ್ತರ ಬರೆದರು. "ನೀವು ಬರೆದುದನ್ನು ಓದಿ ನನಗೆ ನೋವಾಯಿತು. ನನ್ನ ವಿಧಾನಗಳನ್ನು ಇತರರು ಉಪಯೋಗಿಸಿಕೊಳ್ಳುವ ವಿಚಾರದಲ್ಲಿ ನನಗೆ ಕಿಂಚಿತ್ತು ಚಿಂತೆಯೂ ಇಲ್ಲ. ಬದಲಾಗಿ, ನನ್ನ ವಿಧಾನ ಕಳೆದ ಎಂಟು ಹರ್ಷಗಳಿಂದಲೂ ನನ್ನೊಡನೆ ಇರುವುದಾದರೂ ಅದನ್ನು ಮೆಚ್ಚಬಲ್ಲ ಯಾರೊಬ್ಬರನ್ನೂ ನಾನು ಕಂಡಿಲ್ಲ. ನನ್ನ ಹಿಂದಿನ ಕಾಗದದಲ್ಲಿ ನಿಮಗೆ ಬರೆದಿರುವಂತೆ ನಿಮ್ಮಲ್ಲಿ ಓರ್ವ ಅನುಕಂಪಶೀಲಮಿತ್ರರನ್ನು ಕಂಡಿದ್ದೇನೆ. ನನ್ನಲ್ಲಿ ಇರುವ ಅಲ್ಪವನ್ನು ನಿಮ್ಮಕೈಗಳಲ್ಲಿ ಮುಕ್ತ ಮನಸ್ಸಿನಿಂದ ಇಡಲು ನಾನು ಸಿದ್ಧ. ನಾನು ಬಳಸಿರುವ ವಿಧಾನದ ಹೊಸತನವೊಂದು ಈಗಾದರೂ ನನ್ನನ್ನು, ನಾನು ಈಗಾಗಲೇ ನಿಮಗೆ ಕಳಿಸಿರುವ ಫಲಿತಾಂಶಗಳನ್ನು ಹೇಗೆ ಪಡೆದೆನೆಂದು ತಿಳಿಸುವಲ್ಲಿ, ಹಿಂಜರಿಯುವಂತೆ ಮಾಡುತ್ತಿರುವುದು."

ಹಾರ್ಡಿಯವರ ಬೆಂಬಲ ದೊರೆತದ್ದರಿಂದ ಮದರಾಸು ವಿಶ್ವವಿದ್ಯಾಲಯ ತನ್ನ ತೀರ ಜಿಗುಟಾದ ಸಾಂಪ್ರದಾಯಿಕ ನಿಲುವನ್ನು ನಡಿಲಿಸಿ ತೋರಿಕೆಗೆ ಯಾವ ಡಿಗ್ರಿಯೂ ಇಲ್ಲದಿದ್ದ ಆದರೆ ವಾಸ್ತವಿಕವಾಗಿ ಸರ್ವ ಡಿಗ್ರಿಗಳಿಗೂ ಅತೀತರಾಗಿದ್ದ ರಾಮಾನುಜನ್ ಅವರಿಗೆ ವಿದ್ಯಾರ್ಥಿವೇತನವನ್ನು ಮಂಜೂರು ಮಾಡಿ ತನ್ನ ಓರ್ವ ಸಂಶೋಧನ ವಿದ್ಯಾರ್ಥಿಯಾಗಿ ಸೇರಿಸಿಕೊಂಡಿತು (ಮೇ ೧, ೧೯೧೩). ಅಂದಿನಿಂದ ಮುಂದಕ್ಕೆ ಅವರೊಬ್ಬ ಗಣಿತೋದ್ಯಮಿಯಾಗಿಯೇ ಬಾಳಇದರು. ಮುಂದೆ ಮದರಾಸು ವಿಶ್ವವಿದ್ಯಾಲಯ ಹಾರ್ಡಿಯವರ ಸತತ ಪ್ರಯತ್ನಗಳ ಫಲವಾಗಿ ರಾಮಾನುಜನ್ ಅವರನ್ನು ಇಂಗ್ಲೆಂಡಿಗೆ ಕಳಿಸಲು ಬೇಕಾಗುವ ಮೊತ್ತವನ್ನು ಭರಿಸಲು ಒಪ್ಪಿಕೊಂಡಿತು. ಪ್ರಸಕ್ತ ಶತಮಾನದ ತರುಣದಲ್ಲಿ ದಕ್ಷಿಣ ಭಾರತದ ಕರ್ಮಥ ಬ್ರಾಹ್ಮಣ ಯುವಕನೊಬ್ಬ ಸಾಗರಯಾನ ಮಾಡಲು ಮಾನಸಿಕವಾಗಿ ಸಿದ್ದನಾಗುವುದು ಸಾಮಾನ್ಯ ಸಾಹಸವೇನೂ ಆಗಿರಲಿಲ್ಲ. ಸಾಕ್ಷಾತ್ ಸಾಮಗಿರಿದೇವಿಯೇ ಕೋಮಲಮ್ಮಾಳ್ ಅವರಿಗೆ ಕನಸಿನಲ್ಲಿ ಕಾಣಿಸಿಕೊಂಡು ಈ ಯಾನ ಆಗಬೇಕು ಎಂಬುದಾಗಿ ಹರಸಿದಳಂತೆ. ಬೂಟು, ಸುರಾಲು, ಷರಟು, ಕಂಠಮಾಲೆ, ಕೋಟು, ಜುಟ್ಟುರಹಿತ ಕೇಶವಿನ್ಯಾಸ ಮುಂತಾದ ವಿದೇಶೀ ದುಸ್ತಿನಿಂದ ಅಲಂಕೃತರಾದ ರಾಮಾನುಜನ್ ೧೯೧೪ರ ಮಾರ್ಚ ೧೭ ರಂದು ಸಮುದ್ರಯಾನ ಪ್ರಾರಂಭಿಸಿದರು. ಭಾರತದ ಕೆಚ್ಚಾ ಗಣಿತ ಸಂಪತ್ತು ಪೂರೈಸಿದ ಶುದ್ಧ ರತ್ನಾಭರಣವಾಗಿ ಮರಳಲು ಇಂಗಲೆಂಡಿಗೆ ತೆರಳಿತು. ಹಾರ್ಡಿಯವರ ಕನಸು ಮತ್ತು ಭಾರತೀಯ ಗಣಿತಜ್ಞಾರ ಬಯಕಿ ಹೀಗೆ ಒಂದು ನಿರ್ದಿಷ್ಟ ಘಟ್ಟವನ್ನು, ಸಿಮೋಲ್ಲಂಘನ ಘಟ್ಟವನ್ನು, ಮುಟ್ಟಿತು. ಕೇಂಬ್ರಿಜನ್ನು ತಲುಪಿದ ರಾಮಾನುಜನ್ ಟ್ರಿನಿಟಿ ಕಾಲೇಜಿನ ವಿದ್ಯಾರ್ಥಿಯಾಗಿ ಸೇರಿದರು. ಅವರ ಬಾಳಿನ ತೀವ್ರ ಪಟುತ್ವದ ಎರಡನೆಯ ಅವಧಿ (೧೯೧೪-೧೮) ಈಗ ತೊಡಗಿತು. ಅಲ್ಲಿ ಹಾರ್ಡಿ ಮತ್ತು ಅವರ ಸಹೋದ್ಯೋಗಿ ಲಿಟಲ್‌ವೂಡ್ ರಾಮಾನುಜನ್ ಅವರ ಶಿಕ್ಷಣದ ಹೋಣೆಯನ್ನು ಹೊತ್ತುಕೊಂಡರು. "ಇಂಥ ಮನುಷ್ಯನನ್ನು ವ್ಯವಸ್ಥಿತ ಶಿಕ್ಷಣಕ್ಕೆ ಒಳಪಡುವಂತೆ, ಎಂದರೆ ಗಣಿತವನ್ನು ಪ್ರಾರಂಭದಿಂದ ಪುನರಪಿ ಕಲಿಯುವಂತೆ. ನಿರ್ಬಂಧಿಸುವುದು ಅಸಾಧ್ಯವಾಗಿತ್ತು. ಅಲ್ಲದೇ ರಾಮಾನುಜನ್ ತೊಡಕಿನದೆಂದು ಪರಿಗಣಿಸಬಹುದಾದ ವಿಧಿನಿಯಮಗಳ ಮೇಲೆ ಅವಧಾರಣೆ ಹೇರಿದರೆ ಅವರ ಆತ್ಮವಿಶ್ವಾಸವನ್ನೇ ಅದು ನಾಶಪಟಿಸಿಬಿಡುಬಹುದು, ಇಲ್ಲವೇ ಅವರ ಸ್ಫೂರ್ತಿಯ ನಿರಂತರ ಸೆಲೆಯನ್ನೇ ಅದು ಬತ್ತಿಸಿಬಿಡುಬಹುದು ಎಂಬ ಭಯ ಸಹ ಸಮಗಿತ್ತು........ಆದ್ದರಿಂದ ಅವರಿಗೆ ಪಾಠ ಹೇಳಿಕೊಡಲು ನಾನು ಪ್ರಯತ್ನಪಡಬೇಕಾಯಿತು. ಇದರಲ್ಲಿ ನಾನು ತಕ್ಕಮಟ್ಟಿಗೆ ಯಶಸ್ವಿ ಆದೆನಾದರೂ ಅವರು ನನ್ನಿಂದ ಕಲಿತುದಕ್ಕಿಂತ ಹೆಚ್ಚನ್ನು ನಾನೇ ಅವರಿಂದ ಕಲಿತೆ.... ಅವರೆಂದೂ ಆಧುನಿಕ ಚಿಂತನ ವಿಧಾನದ ಗಣಿತಜ್ಞರಾಗಿರಲಿಲ್ಲ. ಅವರನ್ನು ಹೀಗೆ ಮಾಡುವುದು ಅಪೇಕ್ಷಣೀಯವೂ ಆಗಿರಲಿಲ್ಲ...... ಅವರಿಂದ ಪ್ರವಹಿಸುತ್ತಿದ್ದ ಮೂಲಭೂತ ಭಾವನೆಗಳು ಎಂದೂ ಹಿಂಗುವ ಲಕ್ಷಣ ಪ್ರಕಟವಾಗಲಿಲ್ಲ" ಎಂಬುದಾಗಿ ಹಾರ್ಡಿ ಬರೆದಿರುವರು. ೧೯೬೪-೧೮ ರ ಅವಧಿಯಲ್ಲಿ ಪ್ರಕಟವಾದ ರಾಮಾನುಜನ್ ಸಂಶೋಧನ ಪ್ರಬಂಧಗಳ ಸಂಖ್ಯೆ ೨೪. ಇವೆಲ್ಲವೂ ಪೂರೈಸಿದ ಉತ್ತಷ್ಟ ಮಾಲುಗಳೇ. ಹಾರ್ಡಿಯವರು ೧೯೧೫ ರಲ್ಲಿ ಮದರಾಸು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ "....ಆಧುನಿಕ ಯುಗದ ಸರ್ವಶ್ರೇಷ್ಠ ಭಾರತೀಯ ಗಣಿತ ವಿದ್ವಾಂಸ ಇವರೆನ್ನುವುದು ಪ್ರಶ್ನಾತೀತ.... ಕೆಲವೊಂದು ರೀತಿಗಳಲ್ಲಿ ನಾನು ತಿಳಿದಿರುವ ಸಕಲ ಗಣಿತಜ್ಞರಲ್ಲೂ ಇವರೊಬ್ಬ ಅತಿಗಮನಾರ್ಹ ವ್ಯಕ್ತಿ" ಎಂದಿದ್ದಾರೆ.

ಕೇಂಬ್ರಿಜ್ ವಿಶ್ವವಿದ್ಯಾಲಯ ರಾಮಾನುಜನ್ ಅವರಿಗೆ ೧೯೧೬ ರಲ್ಲಿ ಗೌರವ ಬಿ. ಎ. ಪದವಿಯನ್ನು ನೀಡಿ ಸನ್ಮಾನಿಸಿತು. ಲಂಡನ್ನಿನ ವರಿಷ್ಠ ವಿಜ್ಞಾನ ಸಂಘವಾದ ರಾಯಲ್ ಸೊಸೈಟಿ ಇವರನ್ನು ತನ್ನ ಫೆಲೋ ಆಗಿ ಆಯ್ಕೆ ಮಾಡಿಕೊಂಡು (ಎಫ್. ಆರ್. ಎಸ್.) ಒಬ್ಬ ಗಣಿತ ವಿಜ್ಞಾನಿಗೆ ಸಲ್ಲಿಸಬಹುದಾದ ಅತ್ಯುನ್ನತ ಪದವಿಯನ್ನು ನೀಡಿತು (೧೯೧೮).

ಕಟ್ಟಾಸಸ್ಯಾಹಾರಿ, ಇಂಗ್ಲೆಂಡಿನ ಪ್ರತಿಕೂಲ ಹವೆ. ನಿರಂತರ ದುಡಿಮೆ. ಸ್ವಂತ ಪರಿಸರದಿಂದ ತೀರ ಭಿನ್ನವಾದ ಪರಿಸರದಲ್ಲಿ ಸುದೀರ್ಘವಾಸ. ಪ್ರಾರಂಭದಿಂದಲೂ ಅಷ್ಟೇನೂ ಆರೋಗ್ಯವಂತವಲ್ಲದ ದೇಹ. ಇವೆಲ್ಲ ಒಟ್ಟಾಗಿ ರಾಮಾನುಜನ್ ಅವರ ಆರೋಗ್ಯ ಹದತಪ್ಪಿತು. ಮೇ ೧೯೧೭ ರಲ್ಲಿ ಹಾರ್ಡಿಯವರು ಮದರಾಸು ವಿಶ್ವವಿದ್ಯಾಲಯಕ್ಕೆ ರವಾನಿಸಿದ ವರದಿ ಎಷ್ಟು ಅನಿರೀಕ್ಷಿತವಾಗಿತ್ತೋ ಅಷ್ಟೇಕವಳಕಾರಿಯೂ ಆಗಿತ್ತು. ರಾಮಾನುಜನ್ ತೀವ್ರ ಕ್ಷಯರೋಗಗ್ರಸ್ತರಾಗಿದ್ದರು. ಭಾರತದ ಬೆಚ್ಚಗಿನ ಹವೆಗೆ ಬಂಧುಬಳಗದವರ ನಡುವಿಗೆ ಕಳಿಸೋಣವೆಂದರೆ ಯುದ್ಧದ ದಿನಗಳಾದ್ದರಿಂದ ಇಂಥ ಪ್ರಯಾಣ ಸಾಧ್ಯವೇ ಇರಲಿಲ್ಲ. ಇಂಗ್ಲೆಂಡಿನಲ್ಲೇ ಒಂದು ವಿಶ್ರಾಂತಿ ಧಾಮದಲ್ಲಿ ರೋಗ ಶುಶ್ರೂಷೆ ಆರಂಭವಾಯಿತು. ೧೯೧೮ರ ನವಂಬರ ತಿಂಗಳಲ್ಲಿ ಹಾರ್ಡಿಯವರು ಮದರಾಸು ವಿಶ್ವಾವಿದ್ಯಾಲಯಕ್ಕೆ ಸುದೀರ್ಘ ಪತ್ರವೋಂದು ಬರೆದರು. "......ವಿಜ್ಞಾನ ರಂಗದಲ್ಲಿ ಈ ಮೊದಲು ಯಾವ ಭಾರತೀಯನೂ ಪಡೆಯದಿದ್ದಂಥ ಮಹೋನ್ನತ ಸ್ಥಾನವನ್ನೂ ಕೀರ್ತಿಯನ್ನೂ ಗಳಿಸಿ ಅವರು ಭಾರತಕ್ಕೆ ಮರಳುವವರಿದ್ದಾರೆ. ಅವರೆಂಥ ಅನರ್ಘ ನಿಧಿ ಎನ್ನುವುದನ್ನು ಭಾರತ ಪರಿಗಣಿಸುವುದೆಂಬ ವಿಶ್ವಾಸ ನನಗುಂಟು. ಅವರ ನೈಜ ಸರಳತೆ ಹಾಗೂ ವಿನಯ ಯಶಸ್ಸಿನಿಂದ ತಿಲಮಾತ್ರವೂ ಮಾಸಲಿಲ್ಲ. ಆಗಬೇಕಾದದ್ದಿಷ್ಟೆ: ತಾನು ನಿಜವಾಗಿಯೂ ಒಬ್ಬ ಯಶಃಪುರುಷ ಎಂಬುದು ಅವರಿಗೆ ಮನವರಿಕೆ ಆಗಬೇಕು."

p ರಾಮಾನುಜನ್ ಅವರ ಭೌತ ಶರೀರ ತೀವ್ರ ವ್ಯಾಧಿಪೀಡಿತವಾಗಿದ್ದಾಗಲೂ ಅವರ ಬುದ್ಧಿ ಎಂದಿನಂತೆಯೇ ನಿಶಿತವಾಗಿತ್ತು ಎನ್ನುವುದನ್ನು ನಿದಸ್ಶಿಸಲು ಹಾರ್ಡಿಯವರು ಒಂದು ಆಖ್ಯಾನಕವನ್ನು ಬರೆದಿದ್ದಾರೆ. ಮಾಮೂಲಿನಂತೆ ಅವರು ರಾಮಾನುಜನ್ ಅವರನ್ನು ವಿಚಾರಿಸಿಕೊಂಡು ಬರಲು ವಿಶ್ರಾಂತಿ ಧಾಮಕ್ಕೆ ಹೋದರು. ತಾನು ಅಲ್ಲಿಗೆ ಕುಳಿತು ಬಂದ ಟ್ಯಾಕ್ಸಿಯ ಫಲಕ ಸಂಖ್ಯೆ 1729 (= 7 x 13 x 19); ಇದೊಂದು ತೀರ ಜಡ ಮತ್ತು ಸಪ್ಪೆ ಸಂಖ್ಯೆಯಾಗಿ ತೋರುತ್ತದೆ ಎಂದು ಅವರು ನುಡಿದಾಗ ರಾಮಾನುಜನ್ ಸೆಟೆದು ಉದ್ಗರಿಸಿದರು. "ಅಲ್ಲಲ್ಲ, ಇದೊಂದು ಬಲು ಸ್ವಾರಸ್ಯಕರವಾದ ಸಂಖ್ಯೆ. ಎರಡು ಘನಗಳ ಮೊತ್ತವನ್ನು ಎರಡು ಬೇರೆ ಬೇರೆ ರೀತಿಗಳಲ್ಲಿ ನಿರೂಪಿಸಬಹುದಾದ ಕನಿಷ್ಠ ಸಂಖ್ಯೆಯೇ 1729." ಅಂದರೆ

1729 = 1 + 1728 = 1^3 + 12^3

1729 = 729 + 1000 = 9^3 + 10^3

ಇದನ್ನು ಕೇಳಿದ ಹಾರ್ಡಿಯವರು "ಹಾಗಾದರೆ ನಾಲ್ಕನೆಯ ಘಾತಗಳನ್ನು ಕುರಿತಂತೆ ಒಂದು ಕಲಿಷ್ಠ ಸಂಖ್ಯೆ ಇದೆಯೇ? ಇದ್ದರೆ ಅದು ಯಾವುದು?" ಎಂದು ಪ್ರಶ್ನಿಸಿದರು. ತುಸು ಕಾಲ ಯೋಚಿಸಿ ರಾಮಾನುಜನ್ "ಅಂಥ ಸಂಖ್ಯೆಗೆ ಯಾವ ಸ್ಪಷ್ಟ ಉದಾಹರಣೆಯೂ ನನಗೆ ತಿಳಿಯದು. ಅದೇನಾದರೂ ಇದ್ದರೆ ಅದೊಂದು ಬೃಹತ್ಸಂಖ್ಯೆ" ಎಂದರು. ಅಂಥ ಸಂಖ್ಯೆ ಇದೆ:

63, 53, 18, 657 = 59^4 + 158^4 = 133^4 + 134^4

ಪ್ರತಿಯೊಂದು ಘನಪೂರ್ಣಾಂಕವೊ ರಾಮಾನುಜನ್ ಅವರ ಆತ್ಕೀಯ ಸ್ನೇಹಿತನಾಗಿತ್ತು.

ವ್ಯಾಧಿಜರ್ಝರಿತ ಗಣಿತಧೀಮಂತನನ್ನು ಹೊತ್ತ ಹಡಗು ಮದರಾಸು ರೇವನ್ನು ೧೯೧೯ರ ಏಪ್ರಿಲ್ ೧ ರಂದು ಪ್ರವೇಶಿಸಿತು. ರಾಮಾನುಜನ್ ಅವರ ಬಂಧು ಭಾಂಧವರು ಅಲ್ಲಿ ಕಂಡದ್ದು ಚರ್ಮ ಮೂಳೆರೂಪದ ರಾಮಾನುಜನ್ ಛಾಯೆಯನ್ನು ಬದಲಾಗದಿದ್ದುದು ಎರಡು: ಅವರ ಕಣ್ಣುಗಳಲ್ಲಿ ಮಿಂಚುತ್ತಿದ್ದ ಅಪೂರ್ವ ಕಾಂತಿ, ಅವರ ನಿಶಿತಮತಿ. ತಾಯಿ ನೆಲದ ಮೇಲೆಯೇ ಕೊನೆ ಉಸಿರು ಎಳೆಯಲೆಂದು ಅವರು ಮರಳಿದರೋ ಎನ್ನುವಂಥ ಕರುಣಾಜನಕ ದೃಶ್ಯವದು ತೀರ್ವವಾದ ದೈಹಿಕ ಯಾತನೆಯಿಂದ ನರಳುತ್ತಿದ್ದಾಗ ಅದನ್ನು ಮರೆಯಲು ಅವರಿಗಿದ್ದ ಉಪಾಯವೊಂದೇಃ ಗಣಿತ ಚಿಂತನೆ. ಯಮಬಾಗಿಲಲ್ಲಿ ಗುರುತರವಾಗಿ ತಟ್ಟುತ್ತಿದ್ದಾಗಲೂ ಅವರು ಮಿದುಳು ಗಣಿತಚಿಂತನೆಗಳಿಂದ ವಿಮುಖವಾಗಲಿಲ್ಲ: ಜಾನಕಿ ಅಮ್ಮಾಳ್ ತನ್ನ ಪತಿಯ ಬಳಿಯಲ್ಲಿಯೇ ಕುಳಿತು ಅವರಿಗೆ ಬರೆಯಲು ಖಾಲಿ ಕಾಗದದ ತಾನುಗಳನ್ನೂ ಸೀಸದ ಕಡ್ಡಿಯನ್ನೂ ಒದಗಿಸುತ್ತಿದ್ದರು. ಬರೆದಾದ ಹಾಳೆಗಳನ್ನು ಜೋಪಾನವಾಗಿ ಪೇರಿಸಿ ಇಡುತ್ತಿದ್ದರು. ೧೯೧೮-೨೧ ರ ಅವಧಿಯಲ್ಲಿ ಪ್ರಕಟವಾದ ಸಂಶೋಧನ ಪ್ರಬಂಧಗಳ ಸಂಖ್ಯೆ ೧೨ ಎನ್ನುವಾಗ ಅವರ ಮನಸ್ಸಿನ ಪುಟಿತತೆ ಆ ಕಂತುವ ದಿನಗಳಂದು ಸಹ ಎಂಥ ಉನ್ನತ ಮಟ್ಟದಲ್ಲಿತ್ತು ಎಂದು ಊಹಿಸಿಕೊಳ್ಳಬಹುದು.

ಈ ಗಣಿತಶ್ರೀಮಂತನನ್ನು, ಭಾರತರತ್ನವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನಗಳನ್ನೂ ಮಾಡಲಾಯಿತು. ಅತ್ಯುತ್ತಮ ವೈದ್ಯಕೀಯ ನೆರವು. ಯೋಗ್ಯ ಪರಿಸರ ಬಂಧು ಭಾಂಧವರಿಂದ ಆತ್ಕೀಯ ಸೇವೆ, ಇತ್ಯಾದಿ. ಆದರೆ ಏರುತ್ತಿದ್ದ ರೋಗದ ಉಲ್ಬಣತೆಯ ಎದುರು ಇವು ಯಾವುವೂ ಪರಿಣಾಮಕಾರಿ ಆಗಲಿಲ್ಲ. ೧೯೨೦ರ ಎಪ್ರಿಲ್ ೧೬ ರಂದು ಈ ಪಾರಲೌಕಿಕ ಪ್ರತಿಭೆ ನಂದಿಯೇ ಹೋಯಿತು.